Thursday, 13 April 2017

ಧನ್ಯತಾಭಾವ 


ನೀ  ಪಕ್ಕದಲ್ಲಿ  ಇರಬೇಕೆನಿಸಿತ್ತು .... ಕಣ್ಣಂಚಲ್ಲಿ  ನೀರಿತ್ತು ...ಆದರೂ   ಮನಸ್ಸಲ್ಲಿ   ತುಂಬು  ಗೌರವವಿತ್ತು ...ನಿನ್ನ  ಕಷ್ಟದ  ಅರಿವಿತ್ತು ...ನನ್ನ  ಗುರಿಯು  ಸ್ಪಷ್ಟವಾಯ್ತು  .ಬಹುಷಃ  ಅಂದಿನಿಂದಲೇ  ಚಿಗುರಿತ್ತು  ಆತ್ಮವಿಶ್ವಾಸ ...ನಿನಗೆ  ಥ್ಯಾಂಕ್ಸ್  ಹೇಳಬೇಕೆನಿಸಿತ್ತು

ಮಾರ್ಕ್ಸ್  ಬರದೇ  ನಿರಾಶೆ  ಆಯಿತು ...ಆದರೂ  ನಾನಂದುಕೊಂಡದ್ದು   ಮಾಡುವ  ಸ್ವಾತಂತ್ರ್ಯವಿತ್ತು ....ಸೋತರೂ  ಕುಂದಬೇಡ  ಎಂಬ  ನಿನ್ನ  ಮಾರ್ಗದರ್ಶನವಿತ್ತು  ...ನಾನು  ಸಾಧಿಸಿ  ತೋರಿಸುವವರೆಗೂ  ನಿನಗೆ  ತಾಳ್ಮೆ  ಇತ್ತು ...ನಿನಗೆ  ಥ್ಯಾಂಕ್ಸ್  ಹೇಳಬೇಕೆನಿಸಿತ್ತು

ನನ್ನಾಯ್ಕೆಯ   ಜೀವನ  ಸಂಗಾತಿಗೆ  ನಿನ್ನ  ಅಂಗೀಕಾರವಿತ್ತು ...ಹೊಸ  ಬದುಕಿಗೆ  ನಿನ್ನ  ಸಹಕಾರವಿತ್ತು ....ತಾಯಿತನದ  ಹರುಷದಲ್ಲಿ  ನಿನ್ನ  ಬೆಂಬಲವಿತ್ತು  ....ವ್ರಿತ್ತಿಪರ   ತಾಯಿಗೆ  ದಾರಿ  ನಿನ್ನಿಂದ  ಸುಗಮವಾಯ್ತು ...ನಿನಗೆ  ಥ್ಯಾಂಕ್ಸ್  ಹೇಳಬೇಕೆನಿಸಿತ್ತು

ಎಲ್ಲದಕ್ಕೂ  ಮೀರಿ  ನಿನ್ನಿಂದ  ನೋಡಿ  ಕಲಿತ  ಜೀವನದ  ಪಾಠಕ್ಕೆ  ....ನೀ ಕಲಿಸಿದ ಕಾಯಕದಲ್ಲಿನ  ಬದ್ಧತೆಗೆ  ...ಎಂದಿಗೂ  ಕಡಿಮೆಯಾಗದ  ಜೀವನೋತ್ಸಾಹಕ್ಕೆ   ...ಈ  ಕೊನೆಯಿಲ್ಲದ  ಥ್ಯಾಂಕ್ಸ್  ಪಟ್ಟಿಯಲ್ಲಿ  ಕೆಲವನ್ನಾದರೂ  ಹೇಳಬೇಕೆನಿಸಿತ್ತು  ಅಮ್ಮ ....ಆದರೆ  ಮಾತಿಗೆ  ಮೀರಿದ  ಈ  ಪ್ರೀತಿ  ತುಂಬಿದ  ಧನ್ಯತಾಭಾವ    ತೋರಲು ಹನುಮಂತನಂತೆ  ಎದೆ  ಸೀಳಿ  ತೋರುವ  ಸಾಮರ್ಥ್ಯ  ಇರಬೇಕಿತ್ತು   

Thursday, 10 December 2015

ನನ್ನ ಪ್ರೇಮ ಪತ್ರ


ನಾ ನೋಡದ, ನಾ ತಿಳಿಯದ

ನನ್ನ ಮನಸ್ಸಿನಾಳದಲ್ಲಿ ಬೇರೂರಿದ

ನನ್ನೊಲವಿನ ನನ್ನವನಿಗೆ

ನಾ ಬರೆಯ ಹೊರಟೆ ಪ್ರೇಮಪತ್ರ

          ಏನೆಂದು ಸಂಬೋಧಿಸಲೀ ಅವನ

          ಎನ್ನ ಹೃದಯ ಕಲಕಿದವನ

          ಮನದ ಹಾಳೆಯಲ್ಲಿ ಹೆಸರು ಬರೆದವನ

          ಕಣ್ಣೆದುರಿಗೆಂದೂ ಬಾರದವನ

ಹರಿದು ಬಿಸುಟ ಹಾಳೆಗಳೆಷ್ಟೋ

ಹರಿದು ಬಂದ ಭಾವನೆಗಳೆಷ್ಟೋ

ಬರೆಯಲು ಹೋರಾಟ ಭಾಷೆಗಳೆಷ್ಟೋ

ಆದರೂ ಬರೆಯದಾದೆ ಒಂದು ಸಾಲಿನಷ್ಟೂ

       ನಾ ಬಯಸಿದಂತೆ ಇರುವ

          ನನ್ನ ಮನದಿಂಗಿತವನ್ನು ಅರಿತಿರುವ

          ಹೃದಯಾಂತರಾಳದಲೆನ್ಣ ಅಣಕಿಸುವ

          ಅವನಿಗೆ ಸಂಬೋಧನೆಯಿಲ್ಲದೆ ಬರೆವೆ ಪತ್ರವ

ಕಣ್ಣಿಗೆ ಕಾಣಿಸದಂತೆ ಬರುವ

ಕಿವಿಗೆ ಕೇಳಿಸದಂತೆ ಪಿಸುಗುಟ್ಟುವ

ಸದಾ ಕಲ್ಪನಲೋಕದ ಕದ ತಟ್ಟುವ

ನಲ್ಲನೆ ಬಾ ಕಣ್ಣೆದುರಿಗೆ ನೋಡುವೆ ನಿನ್ನ ಅಂದವ

          ಪ್ರೇಮದ ನಿರೂಪಣೆಯೇ ತಿಳಿದಿಲ್ಲ

          ಅದು ಹೇಗವುದೆಂದು ಗೊತ್ತಿಲ್ಲ

          ನಿನ್ನ ನನ್ನ ನಡುವಿನ ಸಂಭದದ ಅರಿವಿಲ್ಲ

          ಆದರಿಷ್ಟು ಬಲ್ಲೆ ನೀನಿಲ್ಲದೆ ನಾನಿಲ್ಲ

ಏನೊಂದೂ ಕಾಣಿಕೆಯನ್ನೂ ನಾ ಕೇಳಲಾರೆ

ನಿನ್ನ ಹೃದಯವ ನೀ ಕೇಳಿದರೂ ಕೊಡಲಾರೆ

ಅಗೋಚರವಾದ ನಲಿವನ್ನು ತೊರೆಯಲಾರೆ

ನಾನೆಂದಿಗೂ ನಿನ್ನನ್ನು ಅಗಲಿರಲಾರೆ    

        ಅಪೂರ್ಣವಾಗಿದೆ ಈ ನನ್ನ ಪ್ರೇಮಪತ್ರ

        ಬರೆಯಲಾರೆನು ಲೇಖನಿಯಿಂದ ಮಾತ್ರ

        ಚಿತ್ರಿಸದಾದೆ ನಾ ನನ್ನ ಮನಸ್ಸಿನ   ಚಿತ್ರ

        ಪ್ರೇಮಪತ್ರವೆಂಬುದು ನಿಜವಾಗಲೂ ವಿಚಿತ್ರ

ನಿನಗೇಕೆ ಬರೆಯಲಿ ನಾ ಪ್ರೇಮಪತ್ರ

 ನೀ ಓದಬಲ್ಲೆ ನನ್ನಯ ಚಿತ್ತ

 ಅದರಲ್ಲಿ ಬರೆದಿಹೆ ನಾ ನಿನ್ನ ಪ್ರೀತಿಯ ಮೊತ್ತ

 ಬಾ ಓದೆನ್ನ ಹೃದಯದಲ್ಲಿ ತಿದ್ಡಿಹ ಪ್ರೇಮಪತ್ರ

 

 

 

Tuesday, 27 October 2015

ಮಹತ್ವಾಕಾಂಕ್ಷೆ ಮತ್ತು ಮಹಿಳೆ


ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯ ಇಲ್ಲ ಎನ್ನುವ ವಿಚಾರ ಜನ ಸಾಮಾನ್ಯರ ಮನ್ನಸ್ಸಿಂದ ಹೊರಹೋಗಿ ಬಹಳ ವರ್ಷಗಳೇ ಆಗಿವೆ ಆದರೆ ಎಷ್ಟು ಮಂದಿ ಹೆಣ್ಣು ಮಕ್ಕಳಿಗೆ ಅವರ ಕನಸುಗಳನ್ನು ಮತ್ತು ಆಕಾಂಕ್ಷೆಗಳನ್ನು  ಸಾಧಿಸುವ ಅವಕಾಶ ಸಿಗುತ್ತಿದೆ 

ಸಣ್ಣ ವಯಸ್ಸಿನಿಂದ ಕೇಳಿಸಿಕೊಳ್ಳುವ ಮಾತು ಹೆಣ್ಣು ಮಕ್ಕಳೂ ಓದಬೇಕು ಓದಿ ಬುಧ್ಧಿವಂಥರಾಗಬೇಕು ಹಣಕಾಸಿನಲ್ಲಾಗಲಿಸಾಧನೆಯಲ್ಲಾಗಲಿ ಎಂದೂ ಹಿಂದುಳಿಯಬಾರದು. ಇದೆಲ್ಲ ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿ ಕೆಲ ವರುಷಗಳವರೆಗೆ ಮಾತ್ರ,  ಮದುವೆಯ ನಂತರ ಅಥವಾ ಮಕ್ಕಳಿಗೆ ತಾಯಿಯಾದ ನಂತರ ಎಷ್ಟು ಹೆಣ್ಣು ಮಕ್ಕಳಿಗೆ ಕೆಲಸಕ್ಕೆ ಹೋಗುವ ಮತ್ತು ಅವರ ಆಕಾಂಕ್ಷೆ ಎಡೆಗೆ  ದಾರಿ ಹುಡುಕುವ ಅವಕಾಶವಿದೆ?

ವ್ರತ್ತಿ ಜೀವನದಲ್ಲಿ ಸಾಧನೆ ಮಾಡುವ ಮತ್ತು ಸಂಸಾರದೆಡೆಗೂ ಗಮನ ಕೊಡುವ ಎರಡು ದಾರಿಯಲ್ಲಿ ನಡೆಯುವ ಜೀವನ ಎಷ್ಟು ಜನರಿಗೆ ಲಭ್ಯ?
ಈ ಎರಡನ್ನು ಮಾಡಲಾಗದ್ದು ಹೆಣ್ಣಿನ ಅಸಮರ್ಥತೆಗಿಂತ ಸಂಸಾರದಲ್ಲಿನ ಮತ್ತು ಕಚೇರಿಯಲ್ಲಿನ ಜನರ ಹೊಂದಾಣಿಕೆಯೇ ಹೆಚ್ಹಿನ ಪಾತ್ರ ವಹಿಸುತ್ತದೆ.  ಈಗಿನ ವಿಭಕ್ತ ಕುಟುಂಬಗಳಲ್ಲಿ ಪುರುಷರೂ ಮಹಿಳೆಯರಿಗೆ ಮನೆಯ ಜವಾಬ್ದಾರಿಗಳಲ್ಲಿ ಕೈ ಜೋಡಿಸಿದರೆ ಮತ್ತು ಕಚೇರಿಗಳಲ್ಲಿ ವ್ರತ್ತಿಪರ ಮಹಿಳೆಯರಿಗೆ, ತಾಯಂದಿರಿಗೆ ಹೊಂದಿಕೊಳ್ಳುವ ಸಮಯ (flexible timings) ಒದಗಿಸಿದರೆ ಮಹಿಳೆಯೂ ಅವಳ ಕನಸುಗಳನ್ನು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಸಾಧ್ಯ

Sunday, 13 September 2015

ನಲವತ್ತರ ತುಮುಲ


ಪ್ರೀತಿ  ತುಂಬಿದ  ದಾಂಪತ್ಯ, ಮುದ್ದಾದ  ಮಕ್ಕಳು, ತೊಂದರೆ  ಕೊಡದ  ನೆಂಟರು, ಕೈ  ತುಂಬ  ಸಂಬಳದ  ಕೆಲಸ ….ಒಟ್ಟಲ್ಲಿ ಸುಖದ ಜೀವನ..ಆದರೂ ಏನೋ ಇಲ್ಲ , ಏನೋ ಮಾಡಿಲ್ಲ, ಯಾವುದೊ ಸರಿ ಇಲ್ಲ ಎಂಬ ಭಾವ ಮನದ ಮೂಲೆಯಲ್ಲಿ ಕೂತು ದಿನೇ ದಿನೇ ಕೊರುಯುತ್ತಿದೆ.ಏನಿದು.ನಲವತ್ತಾಯಿತಲ್ಲ ಎಂಬ  ಭಯವೇನಲವತ್ತಾದರೂ ಏನೂ ಮಾಡಿಲ್ಲ ಎಂಬ ಬೇಜಾರೆ?

ಯಾರು ಏನೇ ಮಾತನಾಡಿದರು ಮನಸ್ಸು ಅಲ್ಲಿಗೆ ತಿರುಗಿ ಬರುತ್ತಿದೆ, ನಾನೇನು ಆಗಬೇಕೆನ್ದಿದ್ದೇನೋ ಅದು  ಆಗಿದ್ದೆನೆಯೇ? ನನ್ನ ಕನಸು ಏನಿತ್ತು? ಯಾಕೆ ವಿರುಧ್ಧ ದಿಕ್ಕಿನಲ್ಲಿ ನನ್ನ ಪಯಣ? ಇದು ಹೊಸದಲ್ಲ ಕಾಲೇಜ್ ಜೀವನ ಪ್ರಾರಂಭಿಸಿದಾಗ, ವೃತ್ತಿ ಜೀವನ ಶುರು ಮಾಡಿದಾಗ.ಯೋಚಿಸಿದ್ದೆ ಆದರೂ ಈಗ ಅದರ ಪರಿಯೇ  ಬೇರೆಇದಕ್ಕೊಂದು ದಾರಿ ಹುಡುಕಲೇ ಬೇಕೆಂಬ ಹಂಬಲ

ಮಕ್ಕಳಿಗೆ ಪಾಠ ಹೇಳುವಾಗಮಕ್ಕಳ ಭವಿಷ್ಯ ಯೋಚಿಸುವಾಗನನ್ನೊಳಗೆ ನಾನೆ ಕೇಳಿಕೊಳ್ಳುವ ಪ್ರಶ್ನೆನಾನೇನು ಸಾಧಿಸಬೇಕು ಅಂದುಕೊಂಡಿದ್ದೆಏನು ಮಾಡಿದೆತಲೆ ಮಾತ್ರವಲ್ಲದೆ ನಿದ್ರೆಯೂ ಕೆಡಿಸುವ  ಯೋಚನೆ.ಮುಂದೇನು? ಎಲ್ಲ ಸರಿ ಇದೆ ಆದರೂ ಇನ್ನೇನೋ ಬೇಕಿದೆ.ನಾನು ಏನು ಮಾಡಬಹುದು ಎಂಬುವುದು ನನಗಲ್ಲದೆ ಬೇರೆ ಯಾರಿಗೆ ಗೊತ್ತಿರಬಹುದು, ಆದರೂ ನಮ್ಮ ಯೋಚನೆ ದಿಕ್ಕನ್ನು ಸರಿಯಾದ ದಿಶೆಗೆ ತಿರುಗಿಸಲು ಓರ್ವ ಮಾರ್ಗದರ್ಶಕಗುರುವಿನ ಅಗತ್ಯ ಇದೆ ಎನಿಸುತ್ತದೆ, ನಮ್ಮ ಕಸಿವಿಸಿ ಗೊಂದಲಗಳನ್ನು ಅರಿತು ನಮ್ಮಲ್ಲಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಾವೇ ಅರಿತು ಮುಂದುವರಿಯಲು ಮಾರ್ಗದರ್ಶನ ನೀಡುವವರನ್ನು ಹುಡುಕಿಕೊಳ್ಳ ಬೇಕುಗುರಿ ಸಾಧಿಸುವಮಾಡುವ ಕೆಲಸದಲ್ಲಿ ಹುರುಪು ಉತ್ಸಾಹ ತುಂಬಿಕೊಳ್ಳುವ ಕಾರ್ಯಗಳನ್ನು ಶುರು ಮಾಡಿಮುಂದುವರಿಸಿಕೊಂಡು ಹೋದಲ್ಲಿನಲವತ್ತರ ತುಮುಲದಿಂದ  ನಲವತ್ತರ ಜ್ಞಾನೋದಯ ಆಗುವುದೇ?